- ವಿಕಳಾವಸ್ಥೆ
ಎರೆಯಂತೆ ಕರಕರಗಿ ಮಳಲಂತೆ ಜರಿಜರಿದು
ಕನಸಿನಲಿ ಕಳವಳಿಸಿ ನಾನು ಬೆರಗಾದೆ.
ಆವಿಗೆಯ ಕಿಚ್ಚಿನಂತೆ ಸುಳಿಸುಳಿದು ಬೆಂದೆ
ಆಪತ್ತಿಗೆ ಸಖಿಯರ ನಾನಾರುವನು ಕಾಣೆ.
ಎನಗೆ ನೀ ಕರುಣಿಸಾ ಚೆನ್ನಮಲ್ಲಿಕಾರ್ಜುನ.
ಕಳಾ ಎಂದರೆ ಪ್ರಕಾಶ. ಅವಸ್ಥೆ ಎಂದರೆ ಹಂತ. ವಚನದಲ್ಲಿ ಕಳಾ ಎಂದರೆ ವಿಶೇಷ ಪ್ರಕಾಶ. ವಿಶೇಷ ಹಂಬಲ. ಇದು ವಿಕಳಾವಸ್ಥೆಯ ಅಕ್ಕಮಹಾದೇವಿಯವರು ಪರಮಾತ್ಮ ಚೆನ್ನ ಮಲ್ಲಿ ಕಾರ್ಜುನನ ಹಂಬಲದಲ್ಲಿ ಅಭಿವ್ಯಕ್ತಿ ಮಾಡಿದ ವಚನ. ತನ್ನ ವ್ಯಕ್ತಿತ್ವ ಅಂತರಂಗ ಪರಮಾತ್ಮನಿಗಾಗಿ ಎಷ್ಟೊಂದು ಕಳವಳದಲ್ಲಿದೆ ಎಂಬುದನ್ನು ದೃಷ್ಟಾಂತ ರೂಪಕದ ಮೂಲಕ ಹೇಳಿದ್ದಾರೆ. ಮಳೆಗಾಲದ ವೈಭವವನ್ನು ಭೂಮಿಯ ಮೇಲೆ ಕಣ್ಣಿಟ್ಟು ನೋಡಬೇಕು. ಭೂಮಿಯ ಮೇಲೆ ಹನಿಹನಿಯಾಗಿ ಧಾರೆ ಧಾರೆಯಾಗಿ ನೀರಿನ ಹೊಳೆ ಕಾಲುವೆಯಾಗಿ, ಹಳ್ಳವಾಗಿ ಹರಿದು ಹರಿದು ಓಡುತ್ತದೆ. . ಹರಿದು ಓಡುವ ಹಳ್ಳ, ಕಾಲುವೆಗಳು ಭೂಮಿಯ ಎರೆಮಣ್ಣು ಕಣ ಕಣಗಳನ್ನು, ಮರಳಿನ ಧೂಳಿನ ಅಣುಅಣುಗಳನ್ನು ಜೊತೆ ಜೊತೆಯಾಗಿ ಕರೆದುಕೊಂಡು ಹೋಗಿಬಿಡುತ್ತದೆ. ಎರೆಮಣ್ಣು ಕರಗಿ ನೀರಲ್ಲಿ ಹರಿದರೆ, ಮಣ್ಣು ಮಳಲಾಗಿ ಜರಿದು ಜರಿದು ಹೋಗಿಬಿಡುತ್ತದೆ. ಎರೆಮಣ್ಣು, ಮಳಲು ನೀರಿನ ಪ್ರವಾಹದಲ್ಲಿ ಓಡುವಂತೆ ಹರನ ಹಂಬಲದಲ್ಲಿ ನಾನು ಕೊಚ್ಚಿ ಹೋಗುತ್ತಿದ್ದೇನೆ. ಜಾಗೃತಾವಸ್ಥೆಯಲ್ಲೂ ಹರನ ಹಂಬಲ. ಹೊಳೆ - ಹಳ್ಳಗಳು ಸಾಗರ, ಸಮುದ್ರ ಸೇರಲು ಕಾತುರವಾದಂತೆ ನಾನು ನಿನ್ನನ್ನು ಸೇರಲು ಕಾತುರಳಾಗಿದ್ದೇನೆ ಎನ್ನುತ್ತಾರೆ ಅಕ್ಕಮಹಾದೇವಿಯವರು.
ಸುಣ್ಣದ ಗೂಡು, ಮಡಕೆಯ ಹಗೇವು, ಇಟ್ಟಿಗೆ ಗೂಡು ಇವೆಲ್ಲ ಬೆಂಕಿಯ ಗೂಡುಗಳು. ಸುಣ್ಣ ಸುಡಲು, ಮಡಕೆ, ಇಟ್ಟಿಗೆ ಸುಡಲು ಆವಿಗೆ ಕಿಚ್ಚು ಒಟ್ಟಲಾಗುತ್ತದೆ. ಈ ಕಿಚ್ಚಿನ ತಾಪ ಎಷ್ಟಿರುತ್ತದೆಂದರೆ ಮಣ್ಣನ್ನು ಸುಟ್ಟು ಬೆಂಕಿಯ ಉರಿ, ಕೆಂಪನೆ ಕೆಂಪು ಮಾಡಿಬಿಡುತ್ತದೆ. ಒಳಗೆ ಸುಡುವ ಸುಡುತಾಪ ಹೊರಗೆ ಕಾಣುವುದಿಲ್ಲ. ಹಾಗೆ ಅಕ್ಕಮಹಾದೇವಿಯರ ಅಂತರಂಗ ಆ ಬಗೆಯ ಕಿಚ್ಚಿನಂತಾಗಿದೆ.
ಚೆನ್ನಮಲ್ಲಿಕಾರ್ಜುನನ ವಿರಹದುರಿ ಅಷ್ಟಿಷ್ಟಲ್ಲ. ರಾಡಿ, ಕೆಸರಾಗುವ ಮಣ್ಣು, ಸುಟ್ಟು ಕೊಂಡ ಮೇಲೆ ಕೆಸರಾಗದು. ಕೆಸರಿನ ಗುಣ, ಮತ್ತೆ ಉಳಿಯದು. ಮಣ್ಣು ಮಣ್ಣಾಗಿ ಮಣ್ಣಿನಲ್ಲಿ ಬೆರೆಯುವ ಗುಣ ಹೋಗಿ ಬಿಡುತ್ತದೆ. ಹಾಗೆಯೇ ಅಕ್ಕಮಹಾದೇವಿಯವರು ಸಂಸಾರಿ ಮಾನವರ ಮನೆಯಲ್ಲಿಯೇ ಹುಟ್ಟಿದರು. ಆದರೆ ಈಗ ಚೆನ್ನಮಲ್ಲಿ ಕಾರ್ಜುನನ ಬೇಗುದಿಯಿಂದಾಗಿ ಸಂಸಾರ ಗುಣ ಕಳೆದುಕೊಂಡರು. ಅವರ ಒಡಲು ಇನ್ನು ಸಂಸಾರಕ್ಕೆ ಬರದು. ನೋಡಲು ಅವರು ಹೆಣ್ಣು, ಭಾವಿಸಲು ಗುರು, ಅಲ್ಲಿರುವುದು ಗುರುತ್ವದ ವ್ಯಕ್ತಿತ್ವ. ಅದು ಗುರು, ಜಂಗಮ ಕೂಡ. ಅದು ಸಂಸಾರಕ್ಕಲ್ಲ. ಅದು ಪರಮಾರ್ಥಕ್ಕೆ ಸೋಪಾನವಾಗುವ ಒಡಲು.
ಸುಖದ ಕಾಲಕ್ಕೆ ಜನಸಾಗರವೇ ನಮ್ಮ ಸುತ್ತು ಸುತ್ತುವರಿದಿರುತ್ತದೆ. ಹಣ, ಅಧಿಕಾರ, ಕೀರ್ತಿ ಎಳತರುತ್ತದೆ. ಈ ಜನವೆಲ್ಲ ಹತ್ತಿರ ಬಂದದ್ದು ಜ್ಞಾನ, ವೈರಾಗ್ಯವನ್ನು ನೋಡಿ ಅಲ್ಲ. ನಮ್ಮಲ್ಲಿರುವ ಹಣ, ಅಧಿಕಾರ, ಐಶ್ವಯ್ಯ, ಸಂಪತ್ತು ಕೀರ್ತಿ ನೋಡಿಬಂದರು. ಯಾವಾಗ ಅವು ನಮ್ಮಿಂದ ಸರಿದವು, ಜನರೂ ಸರಿದರು. ಪುರಾಣ ಕಾವ್ಯದ ಕತೆಗಳನ್ನು ಇದಕ್ಕೆ ದೃಷ್ಟಾಂತವಾಗಿ ನೋಡಬಹುದು. ಸತ್ಯಹರಿಶ್ಚಂದ್ರ ಮಹಾರಾಜ ರಾಜ್ಯ ತೊರೆದು ಹೋಗುವ ಕಾಲಕ್ಕೆ ಅವನನ್ನು ಯಾವ ಪ್ರಜೆಗಳು ಅನುಸರಿಸಿ ಹೋಗಲಿಲ್ಲ. ಬುದ್ಧನ ಜೀವನವನ್ನಾಗಲೀ, ಏಸುವಿನ ಜೀವನವನ್ನಾಗಲೀ, ನಳ ಮಹಾರಾಜನ ಜೀವನವನ್ನಾಗಲೀ ನೋಡಿರಿ. ಅವರ ಕಷ್ಟದ ದಿನಗಳಲ್ಲಿ ಎಲ್ಲರೂ ಅವರನ್ನು ದೂರ ಮಾಡಿದರು. ನಮ್ಮಲ್ಲಿ ಕೂಡ ಪ್ರಭುದೇವರು, ಅಕ್ಕಮಹಾದೇವಿಯವರು, ನಿಡುಬಾಳಿನ ಕಷ್ಟದಲ್ಲಿ ಎಲ್ಲರೂ ಅವರನ್ನು ಕೈಬಿಟ್ಟರು. ಇದು ಎಂದೆಂದೂ ಲೋಕಸತ್ಯವಾದುದು. ಜನರು ಯಾವಾಗಲೂ ಹಣ, ಅಧಿಕಾರ ಇದ್ದಲ್ಲಿ ಸುತ್ತುತ್ತಿರುತ್ತಾರೆ. ಜ್ಞಾನ, ಸಾಕ್ಷಾತ್ಕಾರ, ತ್ಯಾಗದ ವಿಚಾರದಲ್ಲಿ ಸದ್ದಿಲ್ಲದೆ ದೂರವಾಗಿ ಬಿಡುತ್ತಾರೆ. ಈಗ ಅಕ್ಕಮಹಾದೇವಿಯರ ಸಂದರ್ಭದಲ್ಲಿ ಆದುದಾದರೂ ಅಷ್ಟೆ. ಚೆನ್ನಮಲ್ಲಿಕಾರ್ಜುನನೇ ಬೇಕೆಂದು ಮೊರೆಯಿಟ್ಟಾಗ ಅಕ್ಕಮಹಾದೇವಿಯರಂತೆ ತಪಸ್ಸು, ಸಾಧನೆ ಮಾಡಲು ತಂದೆ, ತಾಯಿ, ಯಾವ ಬಂಧುಗಳೂ ಬರಲಿಲ್ಲ. ಭಕ್ತಿಯಿಂದ ಪ್ರಭಾವಿತರಾದ ಸದ್‌ಭಕ್ತ ಜನರು ಮಾತ್ರ ಇಂತಹ ಆಧ್ಯಾತ್ಮ ಜೀವಿಗಳಿಗೆ ಆಸರೆಯಾಗುತ್ತಾರೆ. ಈ ಕಟುಸತ್ಯವನ್ನು ಅಕ್ಕಮಹಾದೇವಿಯವರು ಈ ವಚನದಲ್ಲಿ ಬಿಡಿಸಿಟ್ಟಿದ್ದಾರೆ. ಚೆನ್ನಮಲ್ಲಿಕಾರ್ಜುನನಲ್ಲಿ ಆಪತ್ತಿಗೆ ಯಾರೂ ಇಲ್ಲ, ನೀನು ಅನುಗ್ರಹಿಸು. ಕಾಪಾಡು ಎಂದು ಮೊರೆ ಇಟ್ಟಿದ್ದಾರೆ.